ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ.

ನಮ್ಮ ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ರೈತರು ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡುತ್ತಾರ‍ೆ ಈ ದ್ರಾವಣ ತಯಾರಿಕೆ ಕುರಿತು ರೈತರು ಅನುಸರಿಸಬೇಕಾದ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರನಾಶಕ, ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ: ಸಿಂಪರಣೆ ಕೈಗೊಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.

ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು (100 ಲೀಟರ್ ನೀರು)

1. ಮೈಲುತುತ್ತ 1 ಕೆ.ಜಿ.

2. ಸುಣ್ಣ 1 ಕೆ.ಜಿ.

3, ನೀರು’ 100 ಲೀಟರ್.

4. ಸ್ವಚ್ಛವಾದ ಕಬ್ಬಿಣದ ತುಂಡು ಚಾಕು/ಪಿ.ಹೆಚ್.ಪೇಪರ್. 

5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್‌ .

6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್ ಬ್ಯಾರಲ್.

ಇದನ್ನೂ ಓದಿ: Monsoon update : ಕರ್ನಾಟಕ ಹವಾಮಾನ ಮುನ್ಸೂಚನೆ | 10-06-2023

ತಯಾರಿಕೆ ವಿಧಾನ:

ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.

ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್‌ ಬಕೆಟ್‌ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.

ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 40 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದೆ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ, ಸ್ವಲ್ಪ ಸ್ವಲ್ಪ. ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಕೆಲವು ಸಂಧರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ 100 ಲೀಟರ್ ದ್ರಾವಣಕ್ಕೆ 500 ಗ್ರಾಂ ಸುಣ್ಣ ಸಾಕಾಗುತ್ತದೆ, ಆದರೆ ಸುಣ್ಣದ ಪ್ರಮಾಣವನ್ನು ರಸಸಾರವನ್ನು ಪರೀಕ್ಷೆ ಮಾಡುತ್ತ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣವನ್ನು ಸುರಿಯಬಾರದು, ಸರಿಯಾದ ಶೇ. 1ರ ಬೋರ್ಡೋ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ:

• ಕೆಂಪು ಬಣ್ಣದ, ಲಿಟಸ್, ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‌ಮಸ್‌ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

• ಬೋರ್ಡೋ ದ್ರಾವಣದ ರಸಸಾರ 8 ರಿಂದ 10 ಇರುವ ಹಾಗೆ ನೋಡಿಕೊಳ್ಳಬೇಕು.