ರಾಜ್ಯದಲ್ಲಿ ಡೆಂಗಿ ಜ್ವರದ ಪ್ರಸರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಡೆಂಗಿ ಜ್ವರದ(dengue fever) ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಸಧ್ಯ ರಾಜ್ಯದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಹಾಗೂ ನೀರು ಸರಬರಾಜಿನ ಕೊರತೆಯಿಂದಾಗಿ ಡೆಂಗಿ ಪ್ರಕರಣಗಳಲ್ಲಿ ಏರಿಕೆಯನ್ನು ಹೊಂದುತ್ತಿದೆ, ಇದರಿಂದಾಗಿ ಡೆಂಗಿ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಯಶಸ್ವಿಗೊಳಿಸಲು ಸಮುದಾಯ / ಸಾರ್ವಜನಿಕರ ಪಾತ್ರವು ಅತೀ ಮುಖ್ಯವಾಗಿದೆ.
ಈ ಕಾರಣದಿಂದಾಗಿ ಡೆಂಗಿಜ್ವರದ ಲಕ್ಷಣಗಳು, ತೀವ್ರತೆ, ಚಿಕಿತ್ಸೆ ಮತ್ತು ನಿರ್ವಹಣೆ ಹಾಗೂ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಸಾರ್ವಜನಿಕರು ಪಾಲಿಸಬೇಕಾದ ಸ್ವಯಂ ರಕ್ಷಣಾ ವಿಧಾನಗಳ ಮಾಹಿತಿಯನ್ನು ಈ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮಾಹಿತಿಯನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಮಾಧ್ಯಮಗಳ ಮೂಲಕ ಪ್ರಕಟಿಸಿ ಎಲ್ಲಾ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಡೆಂಗಿ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಮನವರಿಕೆ ಮಾಡಲು ಆರೋಗ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಡೆಂಗಿ ಜ್ವರ ಮತ್ತು ಚಿಕುಂಗುನ್ಯ ತಡೆಗಟ್ಟಲು ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು:
ಡೆಂಗಿ ಜ್ವರ:
ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗ ಲಕ್ಷಣಗಳು:
ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈಕೈ & ಕೀಲು ನೋವು, ವಾಕರಿಕೆ ವಾಂತಿ, ಇವುಗಳ ಜೊತೆಗೆ
ತೀವ್ರ ಹೊಟ್ಟೆ ನೋವು, ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು ಕಪ್ಪು ಬಣ್ಣದ ಮಲ ವಿಸರ್ಜನೆ ವಿಪರೀತ ಬಾಯಾರಿಕೆ ತಣ್ಣನೆಯ ಬಿಳಿಚಿದ ಚರ್ಮ, ಜ್ಞಾನ ತಪ್ಪುವುದು ರಕ್ತದ ಒತ್ತಡದ ಕುಸಿತ & ನಾಡಿ ಬಡಿತದ ಕುಸಿತ-ಇವು ಡೆಂಗಿ ರಕ್ತ ಸ್ರಾವ ಜ್ವರ & ಡೆಂಗಿ ಆಘಾತ ಜ್ವರದ ಲಕ್ಷಣಗಳು.
ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ರೋಗ ಲಕ್ಷಣಗಳು ಉಲ್ಬಣಗೊಂಡು ಡೆಂಗಿ ರಕ್ತ ಸ್ರಾವ ಜ್ವರ (Dengue Hemorrhagic Fever – DHF ) ಹಾಗೂ ಡೆಂಗಿ ಆಘಾತ ಜ್ವರ ( Dengue Shock Syndrome – DSS) ದಿಂದ ಸಾವು ಸಂಭವಿಸಬಹುದು. ಆದ್ದರಿಂದ ಡೆಂಗಿ ಜ್ವರದ ಲಕ್ಷಣಗಳು ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
ಚಿಕುಂಗುನ್ಯ :
ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಚಿಕುಂಗುನ್ಯ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದರೆ ಚಿಕೂನ್‌ಗುನ್ಯ ಮಾರಣಾಂತಿಕವಲ್ಲ.
ಇದನ್ನೂ ಓದಿ: Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?
ರೋಗದ ಲಕ್ಷಣಗಳು:
ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುವುದು. ಚಿಕುಂಗುನ್ಯ ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದ್ದರಿಂದ, ಯಾವುದೇ ಜ್ವರವಿರಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಮಾಡಲಾಗುವುದು.
ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳು:
ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳು ಮನೆಗಳಲ್ಲಿನ ನೀರು ಶೇಖರಣಾ ಸಂಗ್ರಾಹಕಗಳಾದ, ಸಿಮೆಂಟ್ ತೊಟ್ಟಿಗಳು, ಬ್ಯಾರೆಲ್, ಡ್ರಂ, ಹೂ ಕುಂಡಗಳ ಕೆಳಗಿನ ತಟ್ಟೆಗಳು, ಏರ್-ಕೂಲರ್, ರೆಫ್ರಿಜರೇಟರ್‌ನ De-frost Tray ಗಳಲ್ಲಿ ಹಾಗೂ ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿ ಬಿಸಾಡಿದ ಒಡೆದ ಬಾಟಲಿ, ಟೈರು, ಪ್ಲಾಸ್ಟಿಕ್ ಗ್ಲಾಸ್, ಎಳೆನೀರಿನ ಚಿಪ್ಪು ಹಾಗೂ ಇತರ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾದ ಮಳೆಯ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ.
ಸಾರ್ವಜನಿಕರು ಯಾವೆಲ್ಲ ಕ್ರಮ ಅನುಸರಿಸಬೇಕು:
1. ಮನೆಯಲ್ಲಿರುವ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಬಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚುವುದು.
2. ಮನೆಯ ಸುತ್ತ-ಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್, ಟೈರು ಇತ್ಯಾದಿ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು – ಘನತ್ಯಾಜ್ಯ ವಸ್ತುಗಳನ್ನು ಬೋರಲಾಗಿಡುವುದು ಮತ್ತು ಶೀಘ್ರವಾಗಿ ಸೂಕ್ತ ವಿಲೇವಾರಿ ಮಾಡಬೇಕು.
3. ಏರ್ ಕೂಲರ್‌ಗಳಲ್ಲಿ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಬದಲಾಯಿಸಬೇಕು.
4. ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು.
5. ಹಗಲು ಹೊತ್ತಿನಲ್ಲಿ ನಿದ್ರಿಸುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರು ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
6. ಡೆಂಗಿ ಜ್ವರ ಪೀಡಿತರೂ ಸಹ ತಪ್ಪದ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
7. ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು.
8. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿತಾಣ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಸ್ವಯಂಸೇವಕರು ನೀಡುವ ಸಲಹೆ – ಸೂಚನೆಗಳನ್ನು ಪಾಲಿಸಿ.
ನೆನಪಿರಲಿ: ಶಾಲಾ – ಕಾಲೇಜು, ಅಂಗನವಾಡಿ, ಸರ್ಕಾರಿ / ಖಾಸಗಿ ಕಛೇರಿಗಳು, ಬಸ್ ಡಿಪೋ ಇತ್ಯಾದಿಗಳಲ್ಲಿಯೂ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ.
ಏನು ಮಾಡಬಾರದು:
1. ಡೆಂಗಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸ್ವಯಂ ವೈದ್ಯ ಪದ್ಧತಿಯನ್ನು ಪಾಲಿಸದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಿರಿ.
2. ಡೆಂಗಿ ಜ್ವರದ ಲಕ್ಷಣಗಳಿದ್ದಲ್ಲಿ ಬೂಫಿನ್ ಅಥವಾ ಇತರ ನೋವು ನಿವಾರಕಗಳನ್ನು ಸೇವಿಸಬಾರದು, ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಗಳಿವೆ.
ಕೊನೆಯದಾಗಿ “ಡೆಂಗಿ ಜ್ವರ /ಚಿಕುಂಗುನ್ಯ ಬಗ್ಗೆ ಭಯ ಬೇಡ, ಆದರೆ ಎಚ್ಚರವಿರಲಿ.