ಇಡೀ ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ಮಾಮೂಲಿಗಿಂತ ತಡವಾಗಿ ಕೇರಳಕ್ಕೆ ಪ್ರವೇಶಿಸುತ್ತವೆ. ಇಷ್ಟೊತ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟಿಸಬೇಕಾಗಿದ್ದ ಮುಂಗಾರು ಮಳೆ ಇನ್ನು ಬಂದಿಲ್ಲ. ಅಷ್ಟೇ ಅಲ್ಲದೇ ಎಲ್ ನೀನೊ ಪ್ರಭಾವದಿಂದ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ. ಮುಂಗಾರು ಮಳೆ ಸಾಧಾರಣವಾಗಿ ಬೀಳಬಹುದು ಎನ್ನುವ ಆತಂಕಕಾರಿ ಮಾಹಿತಿಯನ್ನು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಇಡೀ ದೇಶದ ಹವಾಮಾನ ಮಾನ್ಸೂನ್ ಮಳೆಯ ಮೇಲೆ ಅವಲಂಬಿತವಾಗಿದೆ. ಜೊತೆಗೆ ಭಾರತದ ಆರ್ಥಿಕತೆಯ ದೃಷ್ಟಿಯಿಂದ ಕೂಡ ಮುಖ್ಯವಾಗಿದೆ. ಯಾಕೆಂದರೆ ಭಾರತದ ಕೃಷಿ ಈ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಭಾರತದ ಕೃಷಿಯನ್ನು ಮಾನ್ಸೂನ್ ನೊಂದಿಗಿನ ಜೂಜಾಟ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಮಾನ್ಸೂನ್ ಮಾರುತಗಳು ಎಂದರೆ ಏನು? ಮುಂಗಾರು ಮಳೆ ಎಲ್ಲಿಂದ ಬರುತ್ತದೆ. ಹೇಗೆ ಉಂಟಾಗುತ್ತದೆ. ಬೇರೆ ಮಳೆಗೂ, ಈ ಮಳೆಗೂ ಏನು ವ್ಯತ್ಯಾಸ?
ಏನಿದು ಮುಂಗಾರು?
ಮುಂಗಾರನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಮಾನ್ಸೂನ್ ಎನ್ನುವ ಪದ ಅರೇಬಿಕ್ ಭಾಷೆಯ ಮೌಸಿಂ ಇಂದ ಬಂದಿದೆ. ಮಾನ್ಸೂನ್ ಎಂದರೆ ಕಾಲಕ್ಕೆ ತಕ್ಕಂತೆ ದಿಕ್ಕನ್ನು ಬದಲಿಸುವ ಮಾರುತಗಳು, ಅಥವಾ ಚಲಿಸುವ ಗಾಳಿ, ಬೇಸಿಗೆಯಲ್ಲಿ ಮಾನ್ಸೂನ್ ಅಥವಾ ಮುಂಗಾರು ಮಾರುತಗಳು ಸಮುದ್ರದಿಂದ ಭೂಮಿಯ ಕಡೆಗೆ ಚಲಿಸುತ್ತವೆ. ಹಾಗೆಯೇ ಚಳಿಗಾಲದಲ್ಲಿ ಭೂಮಿಯಿಂದ ಸಮುದ್ರಕ್ಕೆ ಪ್ರಯಾಣ ಮಾಡುತ್ತವೆ. ಅರಬ್ಬಿ ಸಮುದ್ರದಿಂದ ತೇವಾಂಶವನ್ನು ಹೊತ್ತು ಬರುವ ಈ ಮಾರುತಗಳು ಭಾರತದ ಭೂ ಪ್ರದೇಶದ ಮೇಲೆ ಹಾದುಹೋಗುತ್ತವೆ.
ಒಂದುವರೆ ತಿಂಗಳಲ್ಲಿ ಗರಿಷ್ಟ ಮಳೆಯನ್ನು ಸುರಿಸುತ್ತವೆ. ದಕ್ಷಿಣದ ಕೇರಳದಿಂದ ಭಾರತವನ್ನು ಪ್ರವೇಶಿಸಿ ಉತ್ತರೆದ ತುತ್ತ ತುದಿ ಜಮ್ಮು ಕಾಶ್ಮೀರದವರೆಗೆ ಸಾಗುತ್ತವೆ. ಈ ಮಾರುತಗಳು ಸುರಿಸುವ ಮಳೆಯನ್ನೇ ಮುಂಗಾರು ಮಳೆ ಎಂದು ಕರೆಯಲಾಗುತ್ತದೆ. ಹೀಗೆ ಹಾದು ಹೋದ ಮಾರುತಗಳು ಉತ್ತರದಿಂದ ದಕ್ಷಿಣಕ್ಕೆ ಪುನರಾಗಮನವಾಗುತ್ತವೆ. ಕೇರಳದ ಮೂಲಕ ಮತ್ತೆ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತವೆ. ಇದನ್ನೆ ಹಿಂಗಾರು ಮಳೆ ಎಂದು ಕರೆಯುತ್ತಾರೆ. ದಕ್ಷಿಣದಿಂದ ಉತ್ತರಕ್ಕೆ ಸಾಗುವ ಮಾರುತಗಳನ್ನು ನೈರುತ್ಯ ಮಾರುತಗಳು ಎಂದು ಕರೆಯಲಾಗುತ್ತದೆ.
ಇವು ಜೂನ್ ನಿಂದ ಸಪ್ಟೆಂಬರ್ ವರೆಗೆ ಮಳೆಯನ್ನು ಸುರಿಸುತ್ತವೆ. ಅದೇ ರೀತಿ ಉತ್ತರದಿಂದ ದಕ್ಷಿಣಕ್ಕೆ ಜುಲೈನಿಂದ ಆಗಷ್ಟ್ ನಲ್ಲಿ ಹಾದುಹೋಗುವ ಮಾರುತಗಳನ್ನು ಈಶಾನ್ಯ ಮಾರುತಗಳು ಎಂದು ಕರೆಯಲಾಗುತ್ತದೆ. ಇವು ಸಪ್ಟಂಬರ್ ನಿಂದ ಜನವರಿ ಒಳಗೆ ಮಳೆಯನ್ನು ಸುರಿಸುತ್ತವೆ. ಐತಿಹಾಸಿಕವಾಗಿ ಮಾನ್ಸೂನ್ ಗೆ ಬಹಳ ಮಹತ್ವವಿದೆ. ಏಕೆಂದರೆ ಈ ಮಾರುತಗಳನ್ನು ಅನುಸರಿಸಿ ವ್ಯಾಪಾರಿಗಳು ಮತ್ತು ನಾವಿಕರು ಸಮುದ್ರದಲ್ಲಿ ಚಲಿಸುತ್ತಿದ್ದರು. ಮುಂಗಾರು ಮಾರುತಗಳನ್ನು ನೋಡಿಯೇ ರೋಮನ್ನರು ಭಾರತಕ್ಕೆ ಬಂದಿದ್ದರು. ಇನ್ನೂ ಮಧ್ಯ ಪಶ್ಚಿಮ ಆಫ್ರಿಕಾ , ಆಗ್ನೇಯ ಏಷ್ಯಾ ಮತ್ತು ಇತರ ಕೆಲ ಸ್ಥಳಗಳಲ್ಲಿ ಕೂಡ ಮಾನ್ಸೂನ್ ಇದ್ದರೂ ಈ ಮಾರುತಗಳು ಭಾರತ ಉಪಖಂಡದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ.
ಇದನ್ನೂ ಓದಿ: ಕರ್ನಾಟಕದ ಹವಾಮಾನ ಮುನ್ಸೂಚನೆ | 14-06-2023
ಮುಂಗಾರು ಮಳೆ ಹೇಗೆ ಉಂಟಾಗುತ್ತದೆ?
ಭಾರತಕ್ಕೆ ನೈರುತ್ಯ ಮಾರುತಗಳಿಂದ ಬರುವ ಮಳೆಯು ಬಹಳ ಮುಖ್ಯವಾಗಿರುತ್ತದೆ. ಗಾಳಿ ಹೆಚ್ಚು ಒತ್ತಡವಿರುವ ಪ್ರದೇಶದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ಚಲಿಸುತ್ತದೆ. ಗಾಳಿಯು ಅಸಂಖ್ಯಾತ ಚಿಕ್ಕ ಚಿಕ್ಕ ಏರ್ ಮೊಲೆಕ್ಯೂಲ್ ನಿಂದ ನಿರ್ಮಾಣವಾಗಿದ್ದು, ಈ ಏರ್ ಮೊಲೆಕ್ಯೂಲ್ ಗಳು ಸದಾ ಚಲಿಸುತ್ತಲೇ ಇರುತ್ತವೆ ಅಥವಾ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಆ ಮೂಲಕ ತಮ್ಮ ಸಂಪರ್ಕಕ್ಕೆ ಬಂದ ವಸ್ತುವಿನ ಮೇಲೆ ಒತ್ತಡವನ್ನು ಹಾಕುತ್ತವೆ. ಈ ರೀತಿಯಲ್ಲಿಒತ್ತಡವನ್ನು ಗಾಳಿಯ ಒತ್ತಡ ಎಂದು ಕರೆಯುತ್ತಾರೆ.
ಗಾಳಿಯ ಸಾಂಧ್ರತೆ ಹೆಚ್ಚಾದಷ್ಟು ಗಾಳಿಯ ಒತ್ತಡ ಜಾಸ್ತಿ ಇರುತ್ತದೆ. ಆದರೆ ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ಗಾಳಿಯ ಒತ್ತಡ ಕಮ್ಮಿಯಾಗುತ್ತದೆ. ಯಾಕೆಂದರೆ ಗಾಳಿಯ ಕಣಗಳು ಬಿಸಿಯಾದಾಗ ಅವುಗಳಗೆ ಚಲನ ಶಕ್ತಿ ಸಿಕ್ಕಾಗ ಒಂದನ್ನೊಂದು ದೂಡುತ್ತವೆ. ಆದ್ದರಿಂದ ಗಾಳಿಯ ಕಣಗಳ ಸಂಖ್ಯೆ ಕಡಿಮೆಯಾಗಿ ಸಾಂದ್ರತೆ ಮತ್ತು ಒತ್ತಡ ಕೂಡ ಕಡಿಮೆಯಾಗುತ್ತದೆ. ಈ ರೀತಿ ಒತ್ತಡ ಕಮ್ಮಿಯಾದಾಗ ಅಲ್ಲಿಗೆ ಜಾಸ್ತಿ ಒತ್ತಡವಿರುವ ಗಾಳಿ ಬರುತ್ತದೆ.
ಭಾರತವು ಸಮಭಾಜಕ ವೃತ್ತದ ಮೇಲಿದ್ದು, ಭೂಮಿ ಸ್ವಲ್ಪ ಓರೆಯಾಗಿರುವುದರಿಂದ ಭೂಮಿಯ ಬೇರೆ ಬೇರೆ ಭಾಗಗಳ ಮೇಲೆ ಬೇರೆ ಬೇರೆ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ. ಹೀಗಾಗಿ ಉತ್ತರಾರ್ಧ ಗೋಳದಲ್ಲಿ ಬೇಸಿಗೆಯಿದ್ದಾಗ ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಇರುವ ಭಾಗದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ. ಅಂದರೆ ಭಾರತದ ಮಧ್ಯಭಾಗ ಪ್ರದೇಶ ಮತ್ತು ಅದರ ಮೇಲಿನ ಭಾಗದಲ್ಲಿ ಹೆಚ್ಚು ಬಿಸಿಲು ಬೀಳುತ್ತದೆ. ಆದ್ದರಿಂದ ಅಲ್ಲಿನ ಭೂ ಪ್ರದೇಶ ಜಾಸ್ತಿ ಬಿಸಿಯಾಗುತ್ತದೆ.
ಹೀಗಾಗಿ ಅಲ್ಲಿನ ಗಾಳಿ ಹೆಚ್ಚು ಬಿಸಿಯಾಗಿ ಕಡಿಮೆ ಒತ್ತಡ ಉಂಟಾಗುತ್ತದೆ. ಆದರೆ ಅದೇ ಸಮಯದಲ್ಲಿ ಅರಬ್ಬಿ ಸಮುದ್ರದ ಮೇಲಿರುವ ಗಾಳಿಯು ಭೂಮಿಯ ಮೇಲಿರುವ ಗಾಳಿಯಷ್ಟು ಬಿಸಿಯಾಗಿರುವುದಿಲ್ಲ. ಹೀಗಾಗಿ ಸಮುದ್ರದ ಮೇಲಿನ ಗಾಳಿಯಲ್ಲಿ ಕಣಗಳು ಹೆಚ್ಚು ಒತ್ತಡವಿರುತ್ತದೆ. ಈ ರೀತಿಯಾದಾಗ ಗಾಳಿ ಹೆಚ್ಚು ಒತ್ತಡವಿರುವ ಪ್ರದೇಶದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ಬರುತ್ತದೆ. ಅಂದರೆ ಅರಬ್ಬಿ ಸಮುದ್ರದ ಮೇಲಿರುವ ಗಾಳಿ ಭಾರತದ ಭೂಭಾಗದ ಮೇಲೆ ಬರುತ್ತವೆ. ಆದರೆ ಇವು ಬರುವಾಗ ತೇವಾಂಶವನ್ನು ತಗೊಂಡು ಬರುತ್ತವೆ. ಪಶ್ಚಿಮ ಘಟ್ಟಗಳ ಸಾಲು ಗಾಳಿಗೆ ಅಡ್ಡ ಬಂದು ಗಾಳಿಯು ಮೇಲಕ್ಕೆ ಏರಿದಷ್ಟು ತಂಪಾಗುತ್ತದೆ. ತೇವಾಂಶದಲ್ಲಿದ್ದ ನೀರು ಮಳೆ ಹನಿಯಾಗಿ ಭೂಮಿಯ ಮೇಲೆ ಸುರಿಯುತ್ತವೆ.
ಹೀಗೆ ಜೂನ್ ನ ಮೊದಲ ವಾರದಲ್ಲಿ ಕೇರಳವನ್ನು ಪ್ರವೇಶ ಮಾಡುವ ಮುಂಗಾರು ಮಾರುತಗಳು ಸಪ್ಟೆಂಬರ್ ವರೆಗೆ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ವರ್ಷಕ್ಕೆ ಆಗುವ ಶೇ. 90 ರಷ್ಟು ಮಳೆಯನ್ನು ಸುರಿಸುತ್ತವೆ. ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಸುಮಾರು 50-70 ರಷ್ಟು ಮಳೆಯನ್ನು ಸುರಿಸುತ್ತವೆ. ಈ ರೀತಿ ಒಟ್ಟಾರೆಯಾಗಿ ಭಾರತದಲ್ಲಿ ಸರಾಸರಿ 200-300 ಮಿ.ಮೀ. ಮಳೆಯಾಗುತ್ತದೆ. ಕರ್ನಾಟಕ ಕರಾವಳಿ ಪ್ರದೇಶದಲ್ಲಿ 3083.5 ಮಿಮೀ ಉತ್ತರ ಒಳನಾಡಿನಲ್ಲಿ 506 ಮಿ.ಮೀ., ದಕ್ಷಿಣ ಒಳನಾಡಿನಲ್ಲಿ 659.9 ಮಿಮೀ, ಒಟ್ಟಾರೆಯಾಗಿ ರಾಜ್ಯಾದಂತ 832.3 ಮಿಮೀ ವಾಡಿಕೆಯಂತೆ ಮಳೆಯಾಗುತ್ತದೆ. ಆದರೆ ಈ ಸಮಯದಲ್ಲಿ ಮುಂಗಾರು ಮಾರುತಗಳು ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯನ್ನು ತರುವುದಿಲ್ಲ.
ಯಾಕಂದರೆ ಪಶ್ಚಿಮ ಘಟ್ಟಗಳು ಅಡ್ಡ ಬಂದಾಗ ಗಾಳಿಯು ತಂಪಾಗಿ ಹೆಚ್ಚಿನ ಮಳೆಯು ಇಲ್ಲಿಯೇ ಸುರಿದಿದ್ದು, ತಮಿಳುನಾಡಿಗೆ ಹೋಗುವಾಗ ಹೆಚ್ಚಿ ತೇಂವಾಂಶ ಇರುವುದಿಲ್ಲ. ಆದರೆ ಸಪ್ಟೆಂಬರ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದು ಕಮ್ಮಿಯಾಗುವುದರಿಂದ ಜೊತೆಗೆ ಮಳೆಯಾಗುತ್ತಿರುವುದರಿಂದ ಭಾರತದ ಭೂ ಪ್ರದೇಶ ಬೇಗ ತಂಪಾಗುತ್ತದೆ. ಹೀಗಾಗಿ ಭಾರತ ಉಪಖಂಡದ ಗಾಳಿಯಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ. ಅತ್ತ ಹಿಂದೂ ಮಹಾ ಸಾಗರದ ಮೇಲಿನ ಗಾಳಿ ಇಷ್ಟು ತಂಪಾಗಿ ಇರುವುದಿಲ್ಲ.
ಹೀಗಾಗಿ ಅಲ್ಲಿ ಕಡಿಮೆ ಒತ್ತಡವಿದ್ದು ಮಾನ್ಸೂನ್ ಹಿಂತಿರುಗುತ್ತವೆ. ಹಿಮಾಲಯದವರೆಗೆ ಹೋದ ಮಾರುತಗಳು ವಾಪಸ್ ಬಂಗಾಳ ಸಮುದ್ರದ ಮುಖಾಂತರ ಹೋಗುತ್ತವೆ. ಇದಕ್ಕೆ ಈಶಾನ್ಯ ಮಾರುತಗಳು ಅಥವಾ ಹಿಂಗಾರು ಮಳೆ ಎಂದು ಕರೆಯಲಾಗುತ್ತದೆ. ತಮಿಳುನಾಡು ಮತ್ತು ಆಗ್ನೇಯ ಭಾಗದಲ್ಲಿ ಶೇ. 50-60 ಮಳೆಯಾಗುತ್ತದೆ.
ಮಾಹಿತಿ ಕೃಪೆ: masth magaa.com